ಕಪ್ಪೆಚಿಪ್ಪುಹುಳು : ಸಿಹಿ ನೀರಿನಲ್ಲಿ ವಾಸಿಸುವ ಎರಡು ಚಿಪ್ಪು ಹೋಳುಗಳ ಕವಚವನ್ನುಳ್ಳ ಒಂದು ಮೃದ್ವಂಗಿ (ಫ್ರೆಷ್ ವಾಟರ್ ಮಸಲ್). ಇದು ಲ್ಯಾಮೆಲ್ಲಿಬ್ರಾಂಕಿಯ ಅಥವಾ ಪೆಲಿಸಿಪೋಡ ವರ್ಗಕ್ಕೂ ಯೂಲ್ಯಾಮೆಲ್ಲಿ ಬ್ರಾಂಕಿಯ ಗಣದ ಯೂನಿಯೋನಿಡೀ ಕುಟುಂಬಕ್ಕೂ ಸೇರಿದೆ. ಈ ಕುಟುಂಬದಲ್ಲಿ 85 ಜಾತಿಗಳೂ 750 ಪ್ರಭೇದಗಳೂ ಇವೆ. ಮುತ್ತಿನಂತೆ ಮಿರುಗುವ ಚಿಪ್ಪಿನ ಒಳಮೈ, ಸಮಪ್ರಮಾಣದಲ್ಲಿ ಸ್ಫುಟಗೊಂಡ ಸ್ನಾಯು ಕಲೆಗಟ್ಟುಗಳು, ಸುಸ್ಪಷ್ಟವಾದ ಒಂದು ಮ್ಯಾಂಟಲ್ ರೇಖೆ, ಪುಟ್ಟ ಜಲನಾಲೆಗಳು ಮತ್ತು ಮರಳನ್ನು ತೋಡಲು ನೆರವಾಗುವ ಪುಷ್ಟವಾಗಿ ಬೆಳೆದ ಕೈಗೊಡಲಿ ರೂಪದ ಪಾದ-ಇವು ಈ ಕುಟುಂಬದ ವಿಶೇಷ ಲಕ್ಷಣಗಳು. ಯೂನಿಯೊ, ಅನೊಡಾಂಟ, ಕ್ವಾಡ್ರುಲ, ಲಾಂಪ್ಸಿಲಿಸ್, ಲಾಮೆಲ್ಲಿಡೆನ್ಸ್‌ ಮುಂತಾದ ಜಾತಿಗಳು ಮುಖ್ಯವಾದುವು. ಇವು ಸಾಧಾರಣವಾಗಿ ದೊಡ್ಡ ಕೆರೆ ಕೊಳಗಳಲ್ಲಿ ಹಾಗೂ ಶಾಂತವಾಗಿ ನೀರು ಹರಿಯುವ ನದಿ ತೊರೆಗಳ ತಳಭಾಗದ ಮೃದುವಾದ ಮಣ್ಣಿನಲ್ಲಿ ಬಿಲ ಮಾಡಿಕೊಂಡು ವಾಸಿಸುತ್ತವೆ. ಇವುಗಳ ದೇಹದ ಸ್ವಲ್ಪ ಭಾಗ ಮಾತ್ರ ಮಣ್ಣಿನ ಮೇಲ್ಭಾಗದಲ್ಲಿರುತ್ತದೆ. ಪ್ರಾಣಿ ಸತ್ತಮೇಲೆ ಚಿಪ್ಪು ಹೋಳುಗಳ ಮಧ್ಯೆ ಇರುವ ಮೃದುದೇಹ ನಶಿಸಿ ಹೋದಮೇಲೆ ಚಿಪ್ಪಿನ ಹೋಳುಗಳು ಅಲೆಗಳ ಹೊಡೆತಕ್ಕೆ ಸಿಕ್ಕಿ ನದಿ ಅಥವಾ ಕೆರೆ ದಂಡೆಗಳಲ್ಲಿ ಬಂದು ಬೀಳುತ್ತವೆ. ಒಮ್ಮೊಮ್ಮೆ ಈ ಚಿಪ್ಪುಗಳ ಮೇಲೆ ಅಥವಾ ಅವುಗಳ ಬಳಿ ಸಣ್ಣ ಸಣ್ಣ ಕಪ್ಪೆಗಳು ಕಂಡು ಬರುವುದರಿಂದ ಈ ಚಿಪ್ಪು ಪ್ರಾಣಿಗಳಿಗೆ ಕನ್ನಡದಲ್ಲಿ ಕಪ್ಪೆಚಿಪ್ಪು ಹುಳು ಎಂದು ಹೆಸರು ಬಂದಿರಬೇಕು.

ಕಪ್ಪೆಚಿಪ್ಪು ಹುಳುವಿನ ದೇಹ ಮೃದುವಾಗಿದೆ. ಇದನ್ನು ಚಿಪ್ಪಿನ ಹೋಳುಗಳನ್ನು ಬಿಚ್ಚಿ ನೋಡಬಹುದು. ದೇಹದಲ್ಲಿ ಮೂರು ಭಾಗಗಳನ್ನು ಗುರುತಿಸಬಹುದು. 1. ಒಳ ಅಂಗಗಳನ್ನೊಳಗೊಂಡ ಮುದ್ದೆ ಅಥವಾ ವಿಸರಲ್ ಮಾಸ್, 2. ಅದರ ತಳಭಾಗದಿಂದ ಇಳಿಬಿದ್ದು ಮುಂದೆ ಚಾಚಿರುವ ಕೈಗೊಡಲಿ ರೂಪದ ಸ್ನಾಯುಮಯಪಾದ, 3.ದೇಹದ ಇಕ್ಕೆಡೆಗಳಲ್ಲಿ ವಿಸರಲ್ ಮಾಸನ್ನು ಆವರಿಸಿ ಇಳಿಬಿದ್ದಿರುವ ಎರಡು ತೆಳುವಾದ ಮ್ಯಾಂಟಲ್ಗಳು-ಇವೇ ಆ ಮೂರು ಭಾಗಗಳು. ಇದರಲ್ಲಿ ಇತರ ಮೃದ್ವಂಗಿಗಳಲ್ಲಿರುವಂತೆ ಸ್ಪಷ್ಟವಾದ ತಲೆ ಇಲ್ಲ. ದೇಹ ದ್ವಿಪಾಶರ್ವ್‌ ಸೌಷ್ಟವ ಉಳ್ಳದ್ದು. ದೇಹವನ್ನು ಹಾಯ್ದುಹೋಗುವ ಎರಡು ಅಭಿವರ್ತನಿ ಸ್ನಾಯುಗಳು ಚಿಪ್ಪು ಹೋಳುಗಳನ್ನು ಬಂಧಿಸುತ್ತವೆ. ಇವುಗಳಿಗೆ ಅಗ್ರ ಅಭಿವರ್ತನಿಸ್ನಾಯು ಮತ್ತು ಪಶ್ಚ ಅಭಿವರ್ತನಿ ಸ್ನಾಯು ಎಂದು ಹೆಸರು. ಈ ಪ್ರಾಣಿಯ ಬಾಯಿ ಅಗ್ರ ಅಭಿವರ್ತನಿ ಸ್ನಾಯುವಿನ ತಳಭಾಗದಲ್ಲಿ ಇದೆ. ಬಾಯಿಯ ಎಡಬಲದಲ್ಲಿ ಎರಡೆರಡು ತ್ರಿಕೋನಾಕಾರದ ಜೋಲು ತುಟಿಗಳಿವೆ (ಲೇಬಿಯಲ್ ಪ್ಯಾಲ್ಟ್‌್ಸ), ಮ್ಯಾಂಟಲ್ ಪಾಲಿಗಳ ನಡುವಣ ಪ್ರದೇಶಕ್ಕೆ ಮ್ಯಾಂಟಲ್ ಕುಹರ (ಮ್ಯಾಂಟಲ್ ಕ್ಯಾವಿಟಿ) ಎಂದು ಹೆಸರು. ಈ ಮ್ಯಾಂಟಲ್ ಕುಹರದಲ್ಲಿ ಪಾದ, ಶ್ವಸನಾಂಗ ವಿಸರ್ಜನಾಂಗಗಳು ಮತ್ತು ಜನನಾಂಗಗಳ ದ್ವಾರಗಳು ಇವೆಲ್ಲ ಇವೆ. ಮ್ಯಾಂಟಲ್ ಪಾಲಿಗಳು ದೇಹದ ಪಶ್ಚಭಾಗದಲ್ಲಿ ಪರಸ್ಪರ ಕೂಡಿಕೊಂಡಿವೆ. ಆ ಭಾಗದಲ್ಲಿ ಎರಡು ದ್ವಾರಗಳಿವೆ. ಒಂದು ಬೆನ್ನುಭಾಗದ ಅಪವಾಹಿ ದ್ವಾರ (ಎಕ್ಸ್ಹೇಲೆಂಟ್ ಸೈಫನ್) ಮತ್ತು ಎರಡನೆಯದು ಉದರಭಾಗದ ಅವಾಹಿ ದ್ವಾರ (ಇನ್ಹೇಲೆಂಟ್ ಸೈಫನ್).

ಶ್ವಸನಾಂಗಗಳಾದ ಕಿವಿರು(ಗಿಲ್ಸ್‌) ಮತ್ತು ಓಷ್ಠದ ಪ್ಯಾಲ್ಪುಗಳ ಮೇಲೆ ಲೋಮಾಂಗಗಳಿರುತ್ತವೆ (ಸಿಲಿಯ). ಇವುಗಳ ಚಲನೆಯ ಫಲವಾಗಿ ಮ್ಯಾಂಟಲಿನಲ್ಲಿರುವ ನೀರು ಪ್ರವಾಹದಂತೆ ಚಲಿಸಲಾರಂಭಿಸುತ್ತದೆ. ಕಿವಿರಿನ ಮೇಲೆಲ್ಲ ಅಸಂಖ್ಯಾತ ಸೂಕ್ಷ್ಮತಮವಾದ ರಂಧ್ರಗಳಿವೆ. ಆವಾಹಿದ್ವಾರದಿಂದ ಮ್ಯಾಂಟಲ್ ಕುಹರವನ್ನು ಪ್ರವೇಶಿಸಿದ ನೀರು ಕಿವಿರುಗಳ ರಂಧ್ರಗಳ ಮೂಲಕ ಹಾಯ್ದು, ನೀರ್ನಳಿಕೆಗಳ (ವಾಟರ್ ಟ್ಯೂಬ್) ಮೂಲಕ ಸಂಚರಿಸಿ ಅಧಿಕ್ಲೋಮ ಗೂಡನ್ನು (ಸೂಪ್ರಬ್ರಾಂಕಿಯಲ್ ಚೇಂಬರ್) ಹೊಕ್ಕು ಅಪವಾಹಿದ್ವಾರದ ಮೂಲಕ ಹೊರಬರುತ್ತದೆ. ಈ ಪ್ರಾಣಿಯ ಕಿವಿರುಗಳು ಶ್ವಸನ ಕಾರ್ಯದಲ್ಲಿ ನೆರವಾಗುವುದಲ್ಲದೆ, ಸೂಕ್ಷ್ಮ ಆಹಾರಜೀವಿಗಳನ್ನು ಒಳಗೊಂಡ ನೀರಿನ ಪ್ರವಾಹವನ್ನು ಬಾಯಿಯ ಕಡೆ ಸಾಗಿಸುವುದಕ್ಕೂ ಸಹಾಯ ಮಾಡುತ್ತವೆ ಮತ್ತು ಅವು ಕಾವಿನ ಗೂಡಾಗಿಯೂ (ಇಂಕ್ಯುಬೇಷನ್ ಚೇಂಬರ್) ವರ್ತಿಸುತ್ತವೆ. ಚಿಪ್ಪಿನ ಎರಡು ಹೋಳುಗಳು ಪೃಷ್ಠಭಾಗದಲ್ಲಿ ಒರಟು ಹಾಗೂ ಸ್ಥಿತಿಸ್ಥಾಪನಶಕ್ತಿಯುಳ್ಳ ಒಂದು ಅಸ್ಥಿರಜ್ಜುವಿನ (ಹಿಂಜ್ ಲಿಗಮೆಂಟ್) ಸಹಾಯದಿಂದ ಕೂಡಿಕೊಂಡಿರುತ್ತವೆ. ಹೀಗೆ ಕೂಡಿರುವ ಕ್ಷೇತ್ರಕ್ಕೆ ಕೀಲು ರೇಖೆ ಎಂದು ಹೆಸರು. ಈ ಅಸ್ಥಿರಜ್ಜುವಿನ ನೆರವಿನಿಂದ ಚಿಪ್ಪಿನ ಹೋಳುಗಳು ತಳಭಾಗದಲ್ಲಿ ಅಗಲಿಸಿ ಸಂದು ಬಿಟ್ಟುಕೊಳ್ಳುತ್ತವೆ.  ಆದರೆ ಜೀವಂತ ಪ್ರಾಣಿಯಲ್ಲಿ ದೇಹದ ಅಗ್ರ ಮತ್ತು ಪಶ್ಚ ಅಭಿವರ್ತಿನಿ ಸ್ನಾಯುಗಳ ಸಂಕೋಚನದಿಂದ ಚಿಪ್ಪಿನ ಹೋಳುಗಳು ಮುಚ್ಚಿಕೊಂಡಿರುತ್ತವೆ. ಸ್ನಾಯುಗಳು ಸಡಿಲಿದಾಗ ಚಿಪ್ಪಿನ ಹೋಳುಗಳು ಬಾಯಿಬಿಟ್ಟುಕೊಳ್ಳುತ್ತವೆ. ಹೀಗೆ ಉಂಟಾದ ಸಂದುವಿನ ಮೂಲಕ ಪ್ರಾಣಿ ತನ್ನ ಪಾದವನ್ನು ಹೊರಚಾಚುತ್ತದೆ. ಕೀಲುರೇಖೆಯ ಸ್ಥಳದಲ್ಲಿ ಎರಡೂ ಹೋಳುಗಳ ಅಂಚಿನಲ್ಲಿ ಹಲ್ಲುಗಳಿದ್ದು ಒಂದು ಹೋಳಿನ ಹಲ್ಲುಗಳು ಮತ್ತೊಂದರ ಹಲ್ಲುಗಳ ನಡುವೆ ಇರುವ ತೆರವುಸ್ಥಳಗಳಲ್ಲಿ ಹೊಂದಿಕೊಳ್ಳುವಂಥ ಏರ್ಪಾಟು ಇದೆ. ಭ್ರೂಣಾವಸ್ಥೆಯಲ್ಲಿ ಚಿಪ್ಪಿನ ಕವಚ ಚಿಪ್ಪು ಗ್ರಂಥಿಯಿಂದ ಸ್ರವಿಸಲ್ಪಡುತ್ತದೆ. ಆದರೆ ದೊಡ್ಡದಾಗಿ ಬೆಳೆದಂತೆ ಮ್ಯಾಂಟಲಿನಲ್ಲಿರುವ ಗ್ರಂಥಿಗಳೂ ಕವಚದ ನಿರ್ಮಾಣಕಾರ್ಯದಲ್ಲಿ ಪಾಲುಗೊಳ್ಳುತ್ತವೆ. ಪ್ರಾಣಿ ಬೆಳೆದಂತೆಲ್ಲ ಚಿಪ್ಪಿನ ಗಾತ್ರ ದೊಡ್ಡದಾಗುತ್ತದೆ. ಮತ್ತು ಅದರ ಹೋಳುಗಳ ಹೊರಮೈ ಮೇಲೆ ಬೆಳೆವಣಿಗೆಯ ರೇಖೆಗಳು ಹೆಚ್ಚುತ್ತ ಹೋಗುತ್ತವೆ. ಈ ರೇಖೆಗಳು ಚಿಪ್ಪಿನ ಅಂಚಿಗೆ ಸಮಾನಾಂತರವಾಗಿವೆ. ಚಿಪ್ಪಿನ ಅತ್ಯಂತ ಹಳೆಯ ಭಾಗ ದಪ್ಪನಾಗಿದೆ. ಇದಕ್ಕೆ ಅಂಬೊ ಎಂದು ಹೆಸರು. ಇದು ಕೀಲುರೇಖೆಯ ಸಮೀಪದಲ್ಲಿದೆ.

ಚಿಪ್ಪಿನಲ್ಲಿ ಮೂರು ಪದರಗಳಿವೆ. ಇವು ತಮ್ಮ ರಚನೆಯಲ್ಲಿ ವೈವಿಧ್ಯ ತೋರುವುದಲ್ಲದೆ ಬೇರೆ ಬೇರೆ ರಾಸಾಯನಿಕ ವಸ್ತುಗಳಿಂದ ರಚಿತವಾಗಿದೆ. 1. ಪೆರಿಆಸ್ಟ್ರಕಂ ವಸ್ತುವಿನಿಂದ ಕೂಡಿರುವ ಕಪ್ಪು ಮಿಶ್ರವಾದ ಕಂದು ಬಣ್ಣದ ಹೊರಪದರ. 2. ಮಧ್ಯದ ಪ್ರಿಸ್ಮಾಟಿಕ್ ಪದರ; ಇದರಲ್ಲಿ ಅಸಂಖ್ಯಾತ ಸುಣ್ಣದ ಹರಳುಗಳು ಕಾಂಕಿಯೋಲಿನ್ ಎಂಬ ವಸ್ತುವಿನಲ್ಲಿ ಹುದುಗಿರುತ್ತವೆ. 3. ನಾಕ್ರಿಯಸ್ ಪದರ. ಮೊದಲ ಎರಡು ಪದರಗಳು ಮ್ಯಾಂಟಲಿನ ಅಂಚುಗಳಿಂದ ಉತ್ಪಾದನೆಯಾದವು.  ಇದರ ಫಲವಾಗಿ ಬೆಳೆವಣಿಗೆಯ ಸಮಾನ ಕೇಂದ್ರಿಯ ಗುರುತುಗಳನ್ನು ಚಿಪ್ಪಿನ ಮೇಲೆ ಕಾಣಬಹುದು. ಮೂರನೆಯ ಪದರ ಮ್ಯಾಂಟಲಿನ ಇಡೀ ಮೇಲ್ಮೈಯಿಂದ ರಚಿತವಾದ್ದು. ಈ ಪದರಕ್ಕೂ ಮತ್ತು ಮ್ಯಾಂಟಲಿನ ಹೊರಪದರಕ್ಕೂ ನಡುವೆ ಯಾವುದಾದರೊಂದು ಪರಕೀಯ ವಸ್ತು ಅಥವಾ ಪರತಂತ್ರ ಜೀವಿ ಪ್ರವೇಶಿಸಿದರೆ ಅದರ ಸುತ್ತಲೂ ಸುಣ್ಣದ ಪದರಗಳು ಬೆಳೆದು ಅದನ್ನು ಆವರಿಸುತ್ತವೆ. ಮುತ್ತಿನ ಚಿಪ್ಪಿನ ಹುಳುವಿನಲ್ಲಿ ಮುತ್ತು ನಿರ್ಮಾಣವಾಗುವುದು ಈ ವಿಧಾನದಿಂದಲೇ.

ಕಪ್ಪೆಚಿಪ್ಪು ಹುಳುವಿನ ಬೆಳೆವಣಿಗೆಯ ಕ್ರಮ ಮೃದ್ವಂಗಿಗಳಲೆಲ್ಲ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಗಂಡು ಮತ್ತು ಹೆಣ್ಣುಗಳಲ್ಲಿ ಭೇದವಿದ್ದರೂ ಈ ಭೇದಗಳನ್ನು ಹೊರನೋಟದಲ್ಲಿ ಗುರುತಿಸುವುದು ಕಷ್ಟ. ಹೆಣ್ಣಿನ ಅಂಡಾಶಯದಿಂದ ಪರಿಪಕ್ಷವಾದ ಅಂಡಾಣುಗಳು ಹೊರಬಂದು ಕಿವಿರುಗಳ ಜಲನಳಿಕೆಗಳಲ್ಲಿ ಬೀಳುತ್ತವೆ. ಗಂಡಿನ ವೀರ್ಯಾಣುಗಳು ಮ್ಯಾಂಟಲ್ ಕುಹರವನ್ನು ಹೊಕ್ಕು ಕಿವಿರುಗಳ ಮೇಲಿರುವ ರಂಧ್ರಗಳ ಮೂಲಕ ಸಾಗಿ ಕಿವಿರುಗಳ ಒಳಾಂಗಣದಲ್ಲಿರುವ ಅಂಡಾಣುಗಳನ್ನು ಗರ್ಭಾಂಕುರ ಗೊಳಿಸುತ್ತವೆ. ಗರ್ಭಧರಿಸಿದ ಅಂಡಾಣುಗಳು ನೀರು ನಳಿಕೆಗಳಲ್ಲಿ ಬೆಳೆಯಲಾರಂಭಿಸುತ್ತವೆ. ಕೆಲ ದಿನಗಳಲ್ಲಿಯೇ ಅಂಡಾಣು ಕವಚಗಳಿಂದ ಸಣ್ಣ ಸಣ್ಣ ಗ್ಲಾಕಿಡಿಯಂ ಡಿಂಭಗಳು ಹೊರಬರುತ್ತವೆ. ಕೆಲಕಾಲದ ನಂತರ ಇವು ತಾಯಿ ದೇಹದ ಅಪವಾಹಿದ್ವಾರದ ಮೂಲಕ ಹೊರ ಬಂದು ಸ್ವತಂತ್ರ ಜೀವನವನ್ನು ಸಾಗಿಸುತ್ತವೆ. ಈ ಡಿಂಭಕ್ಕೆ ಎರಡು ತ್ರಿಕೋನಾಕಾರದ ತೆಳುವಾದ ಚಿಪ್ಪಿನ ಪಾಲಿಗಳಿವೆ. ಪ್ರತಿ ಚಿಪ್ಪಿನ ಪಾಲಿಯ ಬಿಡುವಾದ ಅಂಚಿನಲ್ಲಿ ಒಳಕ್ಕೆ ಬಾಗಿದ ಮುಳ್ಳಿನಂತಿರುವ ಒಂದು ಹಲ್ಲು ಇದೆ. ಇದರ ಮ್ಯಾಂಟಲ್ ಪಾಲಿಗಳು ಬಹು ಚಿಕ್ಕವು ಮತ್ತು ಅವುಗಳ ಅಂಚಿನಲ್ಲಿ ಮೂರು ಅಥವಾ ನಾಲ್ಕು ಗ್ರಂಥೀಯ ಜೀವಕೋಶಗಳಿವೆ. ಇವುಗಳ ಸ್ರಾವದಿಂದ ಒಂದು ಉದ್ದವಾದ ತಾತ್ಕಾಲಿಕ ಬೈಸಸ್ ಎಂಬ ದಾರ ರೂಪಗೊಂಡು ಹೊರಚಾಚಿರುತ್ತದೆ. ಮ್ಯಾಂಟಲ್ ಪಾಲಿಗಳ ಒಳಮೈ ಮೇಲೆ ವಿಚಿತ್ರವಾದ ಕುಂಚದಂಥ ಜ್ಞಾನೇಂದ್ರಿಯಗಳಿವೆ. ಈ ಗ್ಲಾಕಿಡಿಯಂ ಡಿಂಭಗಳು ನೀರಿನ ತಳಭಾಗಕ್ಕೆ ಇಳಿಯಬಹುದು ಅಥವಾ ನೀರಿನ ಪ್ರವಾಹದ ಮೂಲಕ ಬೇರೆಡೆಗೆ ವಿತರಣೆಯಾಗಬಹುದು. ಕೆಲಕಾಲ ನೀರಿನಲ್ಲಿ ಈಜುತ್ತಿದ್ದಂತೆ ತಮ್ಮ ಸುತ್ತಮುತ್ತ ಈಜುವ ಮೀನುಗಳ ಕಿವಿರುಗಳಿಗೆ ತಮ್ಮ ಕೊಕ್ಕೆ ಮತ್ತು ಬೈಸಸ್ ದಾರದ ಸಹಾಯದಿಂದ ಅಂಟಿಕೊಂಡು ತಮ್ಮ ಸುತ್ತಲೂ ಮೀನಿನ ಅಂಗದ ಆವರಣವನ್ನು ಬೆಳೆಸಿಕೊಂಡು ಕಾಯ ಪರಿವರ್ತನೆಯನ್ನು ಹೊಂದುತ್ತವೆ. ಅಂದರೆ ಇವು ತಮ್ಮ ಎರಡನೆಯ ಡಿಂಭಾವಸ್ಥೆಯನ್ನು ಪರತಂತ್ರ ಜೀವನದಲ್ಲಿ ಕಳೆಯುತ್ತವೆ. ಈ ಜೀವನದಲ್ಲಿ ತಮಗೆ ಬೇಕಾದ ಪೌಷ್ಠಿಕಾಂಶವನ್ನು ತಮ್ಮ ಆತಿಥೇಯ ಮೀನಿನಿಂದ ಪಡೆಯುತ್ತವೆ. ಕಾಯ ಪರಿವರ್ತನೆಯ ಕಾಲದಲ್ಲಿ ಬೈಸಸ್ ದಾರ ಮತ್ತು ಜ್ಞಾನೇಂದ್ರಿಯಗಳು ನಶಿಸಿಹೋಗುತ್ತವೆ. ಬಾಯಿ, ಗುದ, ದೇಹದ ತಳಭಾಗದಲ್ಲಿ ಸ್ನಾಯುಮಯವಾದ ಪಾದ ಮತ್ತು ಕಿವಿರುಗಳು ರೂಪುಗೊಳ್ಳುತ್ತವೆ. ಅನಂತರ ಅವು ತಮ್ಮ ಪೋಷಕ ಜೀವಿಯ ದೇಹದಿಂದ ಹೊರಬಂದು ನೀರಿನಲ್ಲಿ ಇಳಿದು ತಳವನ್ನು ಸೇರಿ ಸ್ವತಂತ್ರ ಜೀವನವನ್ನು ಸಾಗಿಸುತ್ತ ಬೆಳೆಯಲಾರಂಭಿಸುತ್ತವೆ. ಯೂನಿಯೋ, ಕ್ವಾಡ್ರಾಲ ಜಾತಿಯ ಕಪ್ಪೆಚಿಪ್ಪು ಹುಳುಗಳು ಬೇಸಗೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಅನೊಡಾಂಟ, ಲ್ಯಾಂಪ್ಸಿಲಿಸ್ ಜಾತಿಯವು ಬೇಸಗೆಯ ಕೊನೆಯ ಭಾಗದಲ್ಲಿ ಸಂತಾನೋತ್ಪತ್ತಿ ಮಾಡಿ ತಮ್ಮ ಗ್ಲಾಕಿಡಿಯಂ ಡಿಂಭಗಳನ್ನು ಮುಂಬರುವ ವಸಂತ ಋತುವಿನವರೆಗೂ ತಮ್ಮ ದೇಹದಲ್ಲಿಯೇ ಇಟ್ಟುಕೊಳ್ಳುತ್ತವೆ.

ಉತ್ತರ ಅಮೆರಿಕದ ಒಹಾಯೊ ಮತ್ತು ಆಲಬಾಮ ನದಿ ಮಂಡಲಿಗಳಲ್ಲೂ ಯುರೋಪಿನ ಕೆಲದೇಶಗಳಲ್ಲೂ ಮುತ್ತಿನ ಗುಂಡಿಗಳಿಗಾಗಿ ಯೂನಿಯೋ ಜಾತಿಗೆ ಸೇರಿದ ಕಪ್ಪೆಚಿಪ್ಪು ಹುಳುಗಳನ್ನು ಬೆಳೆಸುವ ಉದ್ಯಮ ಬೆಳೆದಿತ್ತು. ಆದರೆ ಪ್ಲಾಸ್ಟಿಕ್ ಉದ್ಯಮ ಹೆಚ್ಚಾದಂತೆ ಈ ಮುತ್ತಿನ ಗುಂಡಿಗಳ ಬೇಡಿಕೆ ಕಡಿಮೆಯಾಗುತ್ತಾ ಬಂದಿದೆ. ಹಿಂದೆ ಮಾನವನಿಗೆ ಈ ಪ್ರಾಣಿಗಳು ಆಹಾರ ವಸ್ತುವಾದದ್ದುವೆಂದು ತೋರುತ್ತದೆ. ಕೆಲದೇಶಗಳಲ್ಲಿ ಈ ಪ್ರಾಣಿಗಳ ಚಿಪ್ಪು ಮತ್ತು ಮೃದುದೇಹದಿಂದ ಹಂದಿ ಮತ್ತು ಕೋಳಿಗಳ ಆಹಾರವನ್ನು ತಯಾರು ಮಾಡುತ್ತಾರೆ.                                  (ಜೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ